ಕಾರ ಕಮರ್

 ಪಶ್ಚಿಮ ಆಫ್‍ಘಾನಿಸ್ತಾನದಲ್ಲಿರುವ ಒಂದು ಪ್ರಾಗೈತಿಹಾಸಿಕ ನೆಲೆ. ಇಲ್ಲಿಯ ಗುಹೆಯಲ್ಲಿ ಕಲ್ಲುಚಕ್ಕೆ ಮತ್ತು ಕೂರಲಗು ಫಲಕದ ಆಯುಧಗಳನ್ನೊಳಗೊಂಡ ಪದರಗಳು ಕಂಡುಬಂದಿವೆ. ಲೆವಾಲ್ವಾಸಿಯನ್ ಸಂಸ್ಕøತಿಯಿಂದ ಸೂಕ್ಷ್ಮಶಿಲಾ ಯುಗ ಸಂಸ್ಕøತಿಯ ವರೆಗಿನ ಅವಶೇಷಗಳು ಇಲ್ಲಿವೆ. ಇಲ್ಲಿ ದೊರಕಿರುವ ಅವಶೇಷಗಳನ್ನು ಇನ್ನೂ ವಿಶದವಾಗಿ ಪ್ರಕಟಿಸಿಲ್ಲವಾದುದರಿಂದ ಖಚಿತವಾಗಿ ಏನೂ ಹೇಳಲಾಗುವುದಿಲ್ಲ. ಈ ಅವಶೇಷಗಳನ್ನು ಸಮೀಪದ ಭಾರತದಲ್ಲಿರುವ ನೆಲೆಗಳ ಅವಶೇಷಗಳೊಂದಿಗೆ ಹೋಲಿಸಿ ನೋಡಿದರೆ ಕೆಲವು ವಿಚಾರಗಳು ತಿಳಿದುಬರುತ್ತವೆ. ಗುಹೆಗೊಳಗೆ ನಡೆದ ಉತ್ಖನನಗಳಿಂದ ತಿಳಿದು ಬರುವಂತೆ ಪ್ರಪ್ರಥಮವಾಗಿ ಒರಟಾದ ಕಲ್ಲುಚಕ್ಕೆಗಳನ್ನು ಉಪಯೋಗಿಸುತ್ತಿದ್ದ ಜನರೂ ಅನಂತರ ಪೂರ್ವಶಿಲಾಯುಗದ ಅಂತ್ಯಕಾಲಕ್ಕೆ ಸೇರುವ ಕೂರಲಗು ಫಲಕಗಳನ್ನು ಬಳಸುತ್ತಿದ್ದ ಜನರೂ ಕೊನೆಯದಾಗಿ ಸೂಕ್ಷಶಿಲಾಯುಗ ರೀತಿಯ ಆಯುಧಗಳನ್ನು ಬಳಸುತ್ತಿದ್ದ ಜನರೂ ಈ ಗುಹೆಯಲ್ಲಿ ವಾಸಿಸುತ್ತಿದ್ದರು. ಇವುಗಳಲ್ಲಿ ಮೊದಲ ಸಂಸ್ಕøತಿಯನ್ನು ಯೂರೋಪಿನ ಲೆವಾಲ್ವಾಸಿಯನ್ ಸಂಸ್ಕøತಿಯೊಂದಿಗೆ ಎರಡನೆಯ ಸಂಸ್ಕøತಿಯನ್ನು ಯೂರೋಪಿನ  ಅರಿಗ್ನೇಸಿಯನ್ ಮತ್ತು ಇರಾಕಿನ ಷನಿದಾರ್ ಗುಹೆಯ ಸಂಸ್ಕøತಿಯೊಂದಿಗೂ ಹೋಲಿಸಲಾಗಿದೆ. ಈ ಪದರಗಳೊಂದಿಗೆ ಗೆಜಿಲಿ, ಕಾಡುಕುರಿ, ಕಾಡುಕುದುರೆ ಮತ್ತು ಮೊಸಳೆಗಳನ್ನು ಬೇಟೆಯಾಗಿ ಆಹಾರಕ್ಕೆ ಉಪಯೋಗಿಸುತ್ತಿದ್ದ ಮಾಹಿತಿಗಳು ದೊರಕಿವೆ. ಸಾಕುಪ್ರಾಣಿಗಳು ಈ ಜನರಿಗೆ ಗೊತ್ತಿರಲಿಲ್ಲ. ಇಂಗಾಲ-14 ಕಾಲನಿರ್ಣಯ ಪದ್ಧತಿಯ ಮೇರೆಗೆ ಇಲ್ಲಿಯ ಸೂಕ್ಷ್ಮಶಿಲಾಯುಧ ಸಂಸ್ಕøತಿ ಕ್ರಿ.ಪೂ. 9ನೆಯ ಸಹಸ್ರಮಾನಕ್ಕೂ ಪೂರ್ವಶಿಲಾಯುಗದ ಸಂಸ್ಕøತಿಗಳು ಕ್ರಿ.ಪೂ. ಸು. 30,000ಕ್ಕೂ ಸೇರುತ್ತವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ